ಬೈಂದೂರು -
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಒಂದು ಗ್ರಾಮ; ಹೋಬಳಿ ಕೇಂದ್ರ ಮತ್ತು ಬಂದರು. ಕುಂದಾಪುರದ ಉತ್ತರಕ್ಕೆ ಸುಮಾರು 30 ಕಿಮೀ ದೂರದಲ್ಲಿದೆ. ಜನಸಂಖ್ಯೆ 14,071 (1981). ಪಶ್ಚಿಮ ಕಡಲ ತಡಿಯಿಂದ ಎರಡೂವರೆ ಕಿಮೀ ದೂರದಲ್ಲಿರುವ ಈ ಊರು ಐತಿಹಾಸಿಕವಾಗಿ ಪ್ರಸಿದ್ಧ. ಇದು ಆಳುಪ ರಾಜರ ಒಂದು ಮುಖ್ಯ ನಗರವಾಗಿತ್ತು. ಆಳುಪರ ಆಡಳಿತ ಕೊನೆಗೊಂಡಾಗ 14ನೆಯ ಶತಮಾನದಲ್ಲಿ ಬೈದೂರನಾಡು ಎಂಬ ರಾಜಕೀಯ ಘಟಕದಲ್ಲಿ ಉಳಿದು ಜೈನರಾಣಿ ಬೈರಾದೇವಿಯ ಆಡಳಿತಕ್ಕೆ ಬಂತು. ಸಿಕ್ಕಿರುವ ಶಾಸನಗಳ ಆಧಾರದ ಮೇಲೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಈ ಊರಿಗೆ ಹೆಚ್ಚು ಪ್ರಾಧಾನ್ಯ ಇತ್ತೆಂದು ತಿಳಿದು ಬರುವುದು. 1514ರಲ್ಲಿ ಬಂದಿದ್ದ ಪೋರ್ಚುಗೀಸ್ ಯಾತ್ರಿಕ ಬಾರ್ಬೋಸನ ಹೇಳಿಕೆ ಪ್ರಕಾರ ಇಲ್ಲಿ ಅಕ್ಕಿಯನ್ನು ಸಂಗ್ರಹಿಸಿ ಭಟ್ಕಳಕ್ಕೆ ಕಳುಹಿಸಲಾಗುತ್ತಿತ್ತಂತೆ. 

	ಸುಮಾರು 9-10ನೆಯ ಶತಮಾನದಲ್ಲಿ ಈ ಪ್ರದೇಶ ಸೇನವಾರ ಎಂಬ ಅರಸು ಮನೆತನದ ಅಧೀನಕ್ಕೊಳಪಟ್ಟಿತು. 11ನೆಯ ಶತಮಾನದ ಕಲ್ಯಾಣದ ಚಾಳುಕ್ಯ ಶೈಲಿಯನ್ನು ಪ್ರದರ್ಶಿಸುವ ಶಿಲ್ಪವುಳ್ಳ ಇಲ್ಲಿಯ ಸೇನೇಶ್ವರ ದೇವಾಲಯ ಹದಿನೆಂಟು ಸಂಖ್ಯೆಗೂ ಮೀರಿ ಇರುವ ಆಳೇತ್ತರದ ವಿಗ್ರಹಗಳಿಂದ ಕಂಗೊಳಿಸುತ್ತಿದೆ. ಅವುಗಳಲ್ಲಿ ಮಹಿಷಮರ್ಧಿನಿ ಕೇಶವ, ಷಣ್ಮುಖ, ಲಕ್ಷ್ಮೀನಾರಾಯಣ, ಶಿವಶಕ್ತಿ, ಆದಿತ್ಯ, ಸಪ್ತಮಾತೃಕೆಗಳು, ಭೈರವ, ತ್ರಿಮೂರ್ತಿ, ನರಸಿಂಹ ಇತ್ಯಾದಿ ವಿಗ್ರಹಗಳಿವೆ. ಕಲ್ಯಾಣದ ಚಾಳುಕ್ಯರ ಪರಿಶುದ್ಧ ಶಿಲ್ಪಶೈಲಿಯ ದ್ವಿಕೂಟ ರಚನೆಯಿಂದ ಕಂಗೊಳಿಸುವ ಈ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ ಮಾದರಿಯ ಏಕೈಕ ಗುಡಿ. 

	ಬೈಂದೂರು ಬಂದರು ತೀರದ ವ್ಯಾಪಾರಕ್ಕೆ ಅನುಕೂಲವಾಗಿದೆ. ಈ ಬಂದರು ಪಡುವಾರೆ ಹಳ್ಳಿಯ ಹತ್ತಿರ ಬೈಂದೂರು ನದಿ ದಡದಲ್ಲಿ ರಾಷ್ಟ್ರೀಯ ಹೆದ್ದಾರಿಗೆ 4 ಕಿಮೀ ದೂರವಿದೆ. ಇದರ ಉತ್ತರಕ್ಕೆ 12 ಕಿಮೀ ದೂರದಲ್ಲಿ ಶಿರೂರು ಎಂಬ ಚಿಕ್ಕ ಬಂದರನ್ನು ಇದರ ಎಲ್ಲೆಗೆ ಸೇರಿಸಲಾಗಿದೆ. ಬೈಂದೂರು ಬಂದರಿನಿಂದ ಅರಣ್ಯ ವಸ್ತುಗಳು, ಒಣಮೀನು ರಫ್ತಾಗುತ್ತವೆ. 

	ಈ ಊರಿಗೆ ಸುಮಾರು ಒಂದು ಕಿಮೀ ದೂರದಲ್ಲಿ ಪಡುವಾರೆ ಎಂಬಲ್ಲಿ ಉತ್ತಮದರ್ಜೆಯ ಅಲ್ಯೂಮಿನಯುಕ್ತ ಲ್ಯಾಟರೈಟ್ ನಿಕ್ಷೇಪವಿದೆ. ಬಾಕ್ಸೈಟ್ ಅದುರು ಪಡುವಾರೆ ಪ್ರದೇಶದಲ್ಲಿಯ ಗುಡ್ಡ ದಿಬ್ಬಗಳಲ್ಲಿ ಸುಮಾರು 61 ಸೆಂಮೀ ನಿಂದ 91 ಸೆಂಮೀ ವರೆಗೆ ದಪ್ಪನಾಗಿ ತೆಳು ಹೊರ ಕವಚದಲ್ಲಿ ಕಂಡುಬರುವುದು. 							
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ